ಕಾರ್ಡೂಚೀ, ಜೋಸುವ

 1835-1907. ಇಟಲಿಯ ಸುಪ್ರಸಿದ್ಧ ಕವಿ, ವಿಮರ್ಶಕ. 1860 ರಿಂದ 1904 ವರೆಗೆ ಬೋಲೋನ್ಯಾ ವಿಶ್ವವಿದ್ಯಾನಿಲಯದಲ್ಲಿ ಅಲಂಕಾರಶಾಸ್ತ್ರದ ಪ್ರಾಧ್ಯಾಪಕನಾಗಿದ್ದ. ರೊಮ್ಯಾಂಟಿಕ್ ತತ್ತ್ವವನ್ನು ವಿರೋಧಿಸಿ, ಇಟಲಿಯ ಸಾಹಿತ್ಯದಲ್ಲಿ ಕ್ಲಾಸಿಕಲ್ (ಅಭಿಜಾತ) ಸಂಪ್ರದಾಯವನ್ನು ಪುನರುಜ್ಜೀವನ ಗೊಳಿಸಬೇಕೆಂಬುದು ಇವನ ಧ್ಯೇಯ. ರೈಮ್ ಎಂಬ ತನ್ನ ಪ್ರಥಮ ಕವನಸಂಗ್ರಹದಲ್ಲಿ ಇಟಲಿ ದೇಶ ಅವನತಿಗಿಳಿದು, ಕಾಯಶೀಲತೆಯನ್ನು ಕಳೆದುಕೊಂಡಿದೆಯೆಂದು ಟೀಕಿಸಿದ್ದಾನೆ. ಇಟಲಿಯ ಇಳಿಗತಿಗೆ ರೊಮ್ಯಾಂಟಿಕ್ ತತ್ತ್ವ ಹಾಗೂ ಕ್ರೈಸ್ತಧರ್ಮವೇ ಮೂಲಕಾರಣವೆಂದಿದ್ದಾನೆ. ಆದ್ದರಿಂದ ಕ್ಲಾಸಿಕಲ್ ಸಂಪ್ರದಾಯದಲ್ಲಿ ಅಭಿವ್ಯಕ್ತವಾದ. ಕ್ರಿಸ್ತನಿಗೆ ಪೂರ್ವದಲ್ಲಿದ್ದ ಪೇಗನಿಸಂ ತತ್ತ್ವವನ್ನು ಪುನಃ ರಾಷ್ಟ್ರದ ಸಾಹಿತ್ಯದಲ್ಲಿ ಮೈಗೂಡಿಸಿಕೊಳ್ಳಬೇಕೆಂದು ಪ್ರಯತ್ನಪಟ್ಟು ನಿಸರ್ಗಚಿಂತನೆ, ಸ್ವತಂತ್ರ ಆಲೋಚನೆ, ಪ್ರಗತಿಮನೋಭಾವ-ಇವನ್ನು ಸಾಧಿಸುವ ಬೌದ್ಧಿಕವಾದವನ್ನು ಮಂಡಿಸಿದ್ದಾನೆ. ಇಟಲಿಯ ನಿಸರ್ಗದ ಸುಂದರ ದೃಶ್ಯಗಳಲ್ಲಿ ದೇಶದ ಇತಿಹಾಸದ ಪ್ರತೀಕವನ್ನೂ ಸ್ಮರಣೆಯನ್ನೂ ಕಂಡಿದ್ದಾನೆ. ಭವ್ಯಕಾವ್ಯವನ್ನು ನಿರ್ಮಿಸುವ ಯುಗ ಕಳೆದು ಹೋಗಿದ್ದರೂ ಕವಿ ಇತಿಹಾಸದ ಹಲವಾರು ಘಟನೆಗಳನ್ನೂ ರಸನಿಮಿಷಗಳನ್ನೂ ಭವ್ಯಕಾವ್ಯಶೈಲಿಯಲ್ಲಿ ಒಡಮೂಡಿಸಬಹುದೆಂದು ತೋರಿದ್ದಾನೆ. ಕೊನೆಯ ಕವನಗಳಲ್ಲಿ ಕ್ರೈಸ್ತಧರ್ಮದ ಕಟುಟೀಕೆ ಕಡಿಮೆಯಾಗಿ ಸುಕುಮಾರತೆ ಸಹಿಷ್ಣುತೆಗಳು ತೋರಿವೆ. ಇವನ ವಿಮರ್ಶಾಗ್ರಂಥಗಳಲ್ಲಿ ನಿರ್ದಾಕ್ಷಿಣ್ಯವಾದ, ಕೆಚ್ಚು, ಆವೇಶಗಳಿಂದ ಕೂಡಿದ. ಚುಚ್ಚು ಮಾತುಗಳೇ ಹೆಚ್ಚು. ಉತ್ತಮ ವಿಮರ್ಶಕನಿಗಿರಬೇಕಾದ ಸಂಯಮ, ವಸ್ತುನಿಷ್ಠೆ ಇವನಲ್ಲಿ ಮಸಕಾದಂತೆ ಕಾಣುತ್ತದೆ. ಆದರೂ ಅವು ಅಂದಿನ ಧೋರಣೆಗಳನ್ನು, ಅಭಿರುಚಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಿವೆ. ಇನ್ನೊ ಎ ಸೇಟಾನ (1865) ರೈಮ್ ನುವೊ ಮತ್ತು ಓಡಿ ಬಾರ್ಬರ (1877-1882)-ಇವು ಈತನ ಮುಖ್ಯ ಕೃತಿಗಳು.      

 (ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ